ಬಾದಾಮಿ 2

ರೋಸೇಸೀ ಕುಟುಂಬಕ್ಕೆ ಸೇರಿದ ಪ್ರಸಿದ್ಧ ಹಾಗೂ ಜನಪ್ರಿಯ ಫಲವೃಕ್ಷ (ಆಲ್ಮಂಡ್). ಸಕ್ಕರೆ ಬಾದಾಮಿ (ಏಪ್ರಿಕಾಟ್), ಚೆರಿ, ಪ್ಲಮ್, ಪೀಚ್ ಮುಂತಾದ ಫಲವೃಕ್ಷಗಳ ಹತ್ತಿರ ಸಂಬಂಧಿಯಾದ ಇದು ಅವುಗಳಂತೆಯೇ ಪ್ರೂನಸ್ ಜಾತಿಗೆ ಸೇರಿದೆ. ಪ್ರೂನಸ್ ಅಮಿಗ್ಡಾಲಿಸ್ ಅಥವಾ ಪ್ರೂನಸ್ ಕಮ್ಯೂನಿಸ್ ಇದರ ಸಸ್ಯಶಾಸ್ತ್ರೀಯ ಹೆಸರು.

ಪ್ರಧಾನವಾಗಿ ಉಪೋಷ್ಣ ವಲಯಗಳ ವೃಕ್ಷವಾದ ಇದರ ತವರು ಪಶ್ಚಿಮ ಏಷ್ಯ ಎಂದು ಬಗೆಯಲಾಗಿದೆ. ಇಂದಿಗೂ ಮಧ್ಯ ಹಾಗೂ ಪಶ್ಚಿಮ ಏಷ್ಯಗಳ ಹಲವಾರೆಡೆ ಇದು ಕಾಡು ಗಿಡವಾಗಿ ಬೆಳೆಯುತ್ತದೆ. ಬಾದಾಮಿಯಲ್ಲಿ ಅಮಿಗ್ಡಾಲಿಸ್, ಅಮಾರ ಮತ್ತು ಸೆಟೈವ ಎಂಬ ಮೂರು ಬಗೆಗಳುಂಟು. ಇವುಗಳ ಪೈಕಿ ಮೊದಲನೆಯದು ಪಶ್ಚಿಮ ಏಷ್ಯ, ಗ್ರೀಸ್ ಮತ್ತು ಉತ್ತರ ಆಫ್ರಿಕಗಳಲ್ಲಿ ಬೆಳೆಯುವ ಕಾಡುಬಗೆಗಳನ್ನೂ ಒಳಗೊಳ್ಳುತ್ತದೆ. ಉಳಿದವೆರಡು ಕೃಷಿಯಲ್ಲಿರುವ ಬಗೆಗಳು. ಅಮಾರ ಬಗೆ ಕಹಿ ಬಾದಾಮಿಯಾದರೆ ಸೇಟಿವ ಎಂಬುದು ಸಿಹಿಬಾದಾಮಿ.

ಬಾದಾಮಿ ಬಲು ಹಿಂದಿನಿಂದ ಬೇಸಾಯದಲ್ಲಿರುವ ಮರ. ಕ್ರಿ.ಪೂ. 10ನೆಯ ಶತಮಾನದ ವೇಳೆಗೆ ಚೀನದಲ್ಲಿ ಇದನ್ನು ಕೃಷಿ ಮಾಡಲಾಗುತ್ತಿತ್ತೆಂದು ಹೇಳಲಾಗಿದೆ. ಕ್ರಿ.ಪೂ. 5ನೆಯ ಶತಮಾನದಲ್ಲಿ ಗ್ರೀಸಿನಲ್ಲಿ ಇದರ ಬೇಸಾಯ ಪ್ರಾರಂಭವಾಯಿತು. ಪ್ರಸಕ್ತ ಇದರ ಬೇಸಾಯ ದಕ್ಷಿಣ ಯೂರೋಪ್, ಅಮೆರಿಕ ಸಂಯುಕ್ತ ಸಂಸ್ಥಾನ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಗಳಲ್ಲೂ ಭಾರತದಲ್ಲೂ ಉಂಟು. ಭಾರತದಲ್ಲಿ ಕಾಶ್ಮೀರ ರಾಜ್ಯ ಇದರ ಕೃಷಿಗೆ ಪ್ರಸಿದ್ಧ. ಇಲ್ಲಿಯ 760-2400 ಮೀ ಎತ್ತರದ ಪರ್ವತಪ್ರದೇಶಗಳಲ್ಲಿ ಸುಮಾರು 2500 ಹೆಕ್ಟೇರಿಗೂ ಹೆಚ್ಚಿನ ಭೂಮಿಯಲ್ಲಿ ಬಾದಾಮಿಯ ತೋಟಗಳುಂಟು. ಉತ್ತರಪ್ರದೇಶದಲ್ಲೂ ಹಿಮಾಚಲ ಪ್ರದೇಶದಲ್ಲೂ ಕೊಂಚ ಪರಿಮಾಣದಲ್ಲಿ ಬೆಳೆಸಲಾಗಿದೆ.

ಬಾದಾಮಿ ಸುಮಾರು 8 ಮೀ. ಎತ್ತರಕ್ಕೆ ಬೆಳೆಯುವ ಮರ. ಎಲೆಗಳು ಗರಗಸದಂಥ ಅಂಚಿನಿಂದ ಕೂಡಿವೆ. ಹೂಗಳು ಒಂಟೊಂಟಿಯಾಗಿ ಅರಳುವುವು. ಇವುಗಳ ಬಣ್ಣ ನಸುಗೆಂಪು ಇಲ್ಲವೆ ಬಿಳಿ. ಹಣ್ಣು ಅಷ್ಟಿಫಲ ಮಾದರಿಯದು. ಸುಮಾರು 3-6 ಸೆಂಮೀ ಉದ್ದ ಇರುತ್ತದೆ. ಪ್ರತಿ ಹಣ್ಣಿಗೂ ಒರಟು ಹೊರಸಿಪ್ಪೆ ಒಳಗಿನ ಚಿಪ್ಪಿನಂಥ ಕರಟ ಉಂಟು. ಚಿಪ್ಪು ತೆಳುವಾಗಿರಬಹುದು ಇಲ್ಲವೆ ಮಂದವಾಗಿರಬಹುದು. ಚಿಪ್ಪಿನ ಒಳಗೆ ಪಲ್ಪ್ (ಬೀಜ) ಇದೆ. ಇದು ಕಂದುಬಣ್ಣದ ತೆಳು ಸಿಪ್ಪೆಯಿಂದ ಆವೃತವಾಗಿದೆ.

ಕಹಿ ಹಾಗೂ ಸಿಹಿ ಬಾದಾಮಿ ಬಗೆಗಳೆರಡನ್ನೂ ತೋಟದ ಬೆಳೆಯಾಗಿ ಬೇಸಾಯ ಮಾಡಲಾಗುತ್ತದೆ. ಕಹಿ ಬಾದಾಮಿಯನ್ನು ಮುಖ್ಯವಾಗಿ ಬಾದಾಮಿ ಎಣ್ಣೆಯ ಉತ್ಪಾದನೆಗಾಗಿ ಬಳಸಲಾಗುತ್ತದೆ. ಸಿಹಿ ಬಾದಾಮಿ ಬಗೆಯಲ್ಲಿ ಗಡಸು ಚಿಪ್ಪಿನವು, ಮೃದು ಚಿಪ್ಪಿನವು ಮತ್ತು ತೆಳು ಚಿಪ್ಪಿನವು ಎಂಬ ಮೂರು ಪ್ರಕಾರಗಳುಂಟು. ಮೂರನೆಯ ಪ್ರಕಾರಕ್ಕೆ ಖಾಗ್ಜಿ ಅಥವಾ ರುಮಾಲಿ ಎಂದು ಹೆಸರು. ಅಲ್ಲದೆ ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಆಯಾತಮಾಡಿಕೊಂಡು ಬೆಳೆಸಲಾಗಿರುವ ಬಗೆಗಳೂ ಭಾರತದಲ್ಲಿವೆ. ಇವುಗಳ ಪೈಕಿ ಅತಿ ಮುಖ್ಯವಾದವು ನಾನ್ ಪರೇಲ್, ಥಿನ್‍ಶೆಲ್, (ತೆಳು ಸಿಪ್ಪೆಯವು), Iಘಿಐ ಮತ್ತು ನೆ-ಪ್ಲಸ್-ಅಲ್ಟ್ರ (ಮೃದು ಸಿಪ್ಪೆಯವು) ಹಾಗೂ ಡರೇಕ್ (ಗಡಸು ಸಿಪ್ಪೆಯವು).

ಬಾದಾಮಿಯ ಬೇಸಾಯಕ್ಕೆ ತಂಪು ಹಾಗೂ ಶುಷ್ಕ ಹವೆ ಉತ್ತಮ. ಫಲ ಮಾಗುವ ಸಮಯದಲ್ಲಿ ಮಾತ್ರ ಬೆಚ್ಚನೆಯ ಹವೆ ಇರಬೇಕು. ವಾರ್ಷಿಕ ಮಳೆ ಸುಮಾರು 60 ಸೆಂ.ಮೀ. ಅಥವಾ ಹೆಚ್ಚಿಗೆ ಇದ್ದರೆ ಒಳ್ಳೆಯದು. ಇದರ ಬೇರು ತುಂಬ ಆಳಕ್ಕೆ ಇಳಿಯುವುದರಿಂದ ಫಲವತ್ತಾದ ಹಾಗೂ ನೀರು ಸುಲಭವಾಗಿ ಬಸಿದು ಹೋಗುವಂಥ ಮಣ್ಣು ಅಗತ್ಯ. ಇದು ಶುಷ್ಕತೆಯನ್ನು ಕೊಂಚ ಮಟ್ಟಿಗೆ ತಡೆದುಕೊಳ್ಳುವುದಾದರೂ ನೆಲದಲ್ಲಿ ನೀರು ನಿಲ್ಲುವುದನ್ನು ಸಹಿಸದು.

ಬಾದಾಮಿ ಮರವನ್ನು ಬೀಜದ ಸಸಿಗಳಿಂದ ಬೆಳೆಸುವುದೇ ಭಾರತದಲ್ಲಿ ಪ್ರಚಲಿತವಿರುವ ಕ್ರಮ. ನರ್ಸರಿಗಳಲ್ಲಿ ಬೀಜ ಬಿತ್ತಿ, ಸಸಿ ಪಡೆದು ಅನಂತರ ತೋಟಗಳಲ್ಲಿ ನೆಡಲಾಗುತ್ತದೆ. ಕೆಲವೊಮ್ಮೆ ಬಾದಾಮಿ, ಸಕ್ಕರೆ ಬಾದಾಮಿ, ಪೀಚ್, ಪ್ಲಮ್ ಮುಂತಾದವುಗಳ ಸಸಿಗಳೊಂದಿಗೆ ಬೇಕೆನಿಸಿದ ಬಾದಮಿ ಟೊಂಗೆಗಳನ್ನು ಕಣ್ಣುಕಸಿ, ಚಾವಟಿಕಸಿ, ನಾಲಗೆ ಕಸಿ ಮುಂತಾದ ವಿಧಾನಗಳಿಂದ ಕಸಿ ಮಾಡಿಯೂ ವೃದ್ಧಿಸುವುದುಂಟು. 1 ಮೀ ವ್ಯಾಸದ ಗುಂಡಿಗಳನ್ನು ಪರಸ್ಪರ 6-8 ಮೀ ಅಂತರಕ್ಕೊಂದರಂತೆ ತೋಡಿ ಸಸಿಗಳನ್ನು ನೆಡಲಾಗುತ್ತದೆ. ಬೇಸಿಗೆಯ ದಿನಗಳಲ್ಲಿ ಆಗಿಂದಾಗ್ಗೆ ನೀರು ಹಾಯಿಸುತ್ತಿದ್ದು ಸಾವಯವ ಗೊಬ್ಬರ ಹಾಗೂ ನೈಟ್ರೋಜನ್ ಯುಕ್ತ ರಸಗೊಬ್ಬರಗಳನ್ನು ಹಾಕಿ ಪೋಷಿಸಲಾಗುತ್ತದೆ. ನೈಟ್ರೊಜನ್ ಒದಗಿಸದಿದ್ದರೆ ಕಾಯಿಕಚ್ಚುವುದು ಕುಂಠಿತಗೊಳ್ಳುತ್ತದೆ.

ಬಾದಾಮಿ ಮರ ತುಂಬ ಎತ್ತರಕ್ಕೆ ಬೆಳೆದರೆ ಕಾಯಿಕೀಳುವುದು ಕಷ್ಟವಾಗುವುದರಿಂದ ಆಗಿಂದಾಗ್ಗೆ ರೆಂಬೆಗಳನ್ನು ಅಪೇಕ್ಷಿತ ಎತ್ತರಕ್ಕೆ ಕತ್ತರಿಸಲಾಗುವುದು. ಸಸಿನೆಟ್ಟ 3-4 ವರ್ಷಗಳಲ್ಲಿ ಫಲಬಿಡಲು ಆರಂಭಿಸಿ 8-10 ವರ್ಷ ವಯಸ್ಸಿನ ವೇಳೆಗೆ ಗರಿಷ್ಠ ಮೊತ್ತದಲ್ಲಿ ಇಳುವರಿ ನೀಡುವುವು. ಬಾದಾಮಿಯ ಇಳುವರಿ ಅಮೆರಿಕದಲ್ಲಿ ಹೆಕ್ಟೇರಿಗೆ 400 ಕೆಜಿ.ಗೂ ಹೆಚ್ಚು. ಬಲೂಚಿಸ್ತಾನದಲ್ಲಿ ಹೆಕ್ಟೇರಿಗೆ 2000 ಕೆಜಿಗೂ ಹೆಚ್ಚು ಇದೆಯಾದರೆ ಕಾಶ್ಮೀರದಲ್ಲಿ ಸುಮಾರು 600 ಕೆಜಿ ಇದೆ. ಬಾದಾಮಿಯ ಕುಯ್ಲಿನ ಶ್ರಾಯ ಜುಲೈ, ಸೆಪ್ಟೆಂಬರ್, ಫಲಗಳು ಪೂರ್ಣ ಮಾಗಿದೊಡನೆ ಹೊರಸಿಪ್ಪೆ ಬಿರಿದು ಒಳಗಿನ ಚಿಪ್ಪು ಕಾಣತೊಡಗುತ್ತದೆ. ಕುಯ್ಲು ಮಾಡಲು ಇದೇ ಯುಕ್ತ ಸಮಯ.

ಆಗ ಫಲಗಳನ್ನು ಸಂಗ್ರಹಿಸಿ ಕೈಯಿಂದ ಇಲ್ಲವೇ ಯಂತ್ರಗಳ ಬಳಕೆಯಿಂದ ಮೇಲಿನ ಸಿಪ್ಪೆ ತೊಡೆದು, ಒಳಗಿನ ಚಿಪ್ಪುಗಳನ್ನು ಕೊಂಚ ಕಾಲ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಕೆಲವೊಮ್ಮೆ ಚಿಪ್ಪುಗಳನ್ನು ಹಬೆಯಲ್ಲಿ ಸಂಸ್ಕರಿಸಿ ಗಂಧಕದ ಹೊಗೆ ಊಡಲಾಗುತ್ತದೆ. ಇದನ್ನು ಹದವರಿತು ಮಾಡಿದಲ್ಲಿ ಚಿಪ್ಪುಗಳಿಗೆ ಒಳ್ಳೆಯ ಆಕರ್ಷಕ ಬಂಗಾರದ ಬಣ್ಣ ಬರುತ್ತದೆ. ಬಿಸಿಲಿಗಾಗಲಿ ಗಂಧಕದ ಹೊಗೆಗಾಗಲಿ ಅತಿಯಾಗಿ ಒಡ್ಡಿದಲ್ಲಿ ಇವು ಬಣ್ಣಗೆಡುವುವಲ್ಲದೆ ಇವಕ್ಕೆ ಒಂದು ತೆರನ ಸಾಬೂನಿನ ರುಚಿ ಬರುತ್ತದೆ ಕೂಡ.

ಬಾದಾಮಿ ಕಾಯಿಗಳನ್ನು ಸಂಗ್ರಹಿಸಿ, ಒಣಗಿಸಿದ ಅನಂತರ ಗಾತ್ರಾನುಸಾರ ವಿವಿಧ ದರ್ಜೆಗಳಾಗಿ ವಿಂಗಡಿಸಲಾಗುತ್ತದೆ. ಸಿಪ್ಪೆಯನ್ನು ಬಿಡಿಸದೆ ತಂಪಾದ, ಶುಷ್ಕವಾದ ಹಾಗೂ ಗಾಳಿಯಾಡುವಂಥ ಸನ್ನಿವೇಶಗಳಲ್ಲಿ ಬಾದಾಮಿಯನ್ನು 6 ತಿಂಗಳಿಗೂ ಹೆಚ್ಚು ಕಾಲ ಸಂಗ್ರಹಿಸಿಡಬಹುದು. ಶೈತ್ಯಾಗಾರಗಳಲ್ಲಾದರೆ ಒಂದು ವರ್ಷಕ್ಕೂ ಹೆಚ್ಚು ಕಾಲ ಕೆಡದಂತೆ ಶೇಖರಿಸಿಡಬಹುದು.

ಬಾದಾಮಿ ಮರಗಳನ್ನು ಹಲವು ತೆರನ ಬೂಷ್ಟು ರೋಗಗಳೂ (ಕ್ಲಾಸ್ಟಿರೊ ಸ್ಪೋರಿಯಮ್ ಫೋಮಿಸ್, ಫಿಲೊಸ್ಟಿಕ್ಟ), ಕೀಟಗಳೂ (ಮಿಮ್ಯಾಸ್ಟ್ರ, ಮಿಲೊಸಿರಸ್-ಮೂತಿಹುಳು, ಕ್ವಾಡ್ರಸ್ಟೈಡಿಯೋಟಸ್-ಶಲ್ಕಕೀಟ), ತಾಮ್ರ ಬೋರಾನ್ ಇತ್ಯಾದಿ ಖನಿಜಗಳ ಕೊರತೆಯಿಂದ ಉಂಟಾಗುವ ರೋಗಗಳೂ ಬಾಧಿಸುವುದುಂಟು.

ಬಾದಾಮಿ ಬೀಜಗಳು ತುಂಬ ಪುಷ್ಟಿದಾಯಕವೆಂದು ಹೆಸರಾಗಿವೆ. ಇವನ್ನು ಹಸಿಯಾಗಿ ಇಲ್ಲವೆ ಹುರಿದು, ಕರಿದು ಹಾಗೆಯೇ ಅಥವಾ ಉಪ್ಪು ಸವರಿ ತಿನ್ನುವುದೂ ಸಿಹಿತಿಂಡಿಗಳ (ಹಲ್ವ) ಹಾಗೂ ಬಾದಾಮಿ ಹಾಲಿನ ತಯಾರಿಕೆಯಲ್ಲಿ ಬಳಸುವುದೂ ಗೊತ್ತಿರುವ ವಿಷಯವೇ. ಕಹಿ ಮತ್ತು ಸಿಹಿ ಬಾದಾಮಿ ಬೀಜಗಳೆರಡರಿಂದಲೂ ಪಡೆವ ಬಾದಾಮಿ ಎಣ್ಣೆಯನ್ನು ಮಿಠಾಯಿ, ಔಷಧಿ ಹಾಗೂ ಸೌಂದರ್ಯ ಸಾಧನಗಳ ತಯಾರಿಕೆಗೆ ಬಳಸಲಾಗುತ್ತದೆ. ಎಣ್ಣೆಯನ್ನು ಹೊರ ತೆಗೆದ ಅನಂತರ ಉಳಿದ ಹಿಟ್ಟು ಮತ್ತು ಬಾದಾಮಿ ಬೆಣ್ಣೆಗಳಲ್ಲಿ (ಆಮಂಡ್ ಬಟರ್) ಪಿಷ್ಟ ಇಲ್ಲವಾದ್ದರಿಂದ ಮಧುಮೇಹ ರೋಗಿಗಳು ಬಳಸಬಹುದಾದ ವಿಶೇಷ ಆಹಾರ ಮತ್ತು ಸೌಂದರ್ಯ ಸಾಮಗ್ರಿ, ಸಾಬೂನು ಮುಂತಾದವುಗಳ ತಯಾರಿಕೆಯಲ್ಲಿ ಇವನ್ನು ಬಳಸುವುದಿದೆ. ಕೆಲವು ದೇಶಗಳಲ್ಲಿ ಎಳೆಯ ಬಾದಾಮಿ ಬೀಜಗಳನ್ನು ಮುರಬ್ಬ, ಉಪ್ಪಿನಕಾಯಿ ಇತ್ಯಾದಿ ರೂಪದಲ್ಲಿ ಸೇವಿಸುವುದುಂಟು.

ಬಾದಾಮಿ ಬೀಜಗಳು ಕೊಬ್ಬು ಮತ್ತು ಪ್ರೋಟೀನುಗಳ ಉತ್ತಮ ಆಕರಗಳು. ಇವುಗಳ ರಾಸಾಯನಿಕ ಸಂಶ್ಲೇಷಣೆ ಈ ರೀತಿ ಇದೆ: ತೇವಾಂಶ 5.25, ಪ್ರೋಟೀನ್ 20.8%, ಕೊಬ್ಬು 58.9% ಶರ್ಕರಗಳು 10.5%, ನಾರಿನ ಅಂಶ 1.7%, ಖನಿಜ ವಸ್ತುಗಳು 2.9% ಪ್ರತಿ 100 ಗ್ರಾಮ್ ಬಾದಾಮಿ ಬೀಜಗಳಿಂದ ದೇಹಕ್ಕೆ ಲಭ್ಯವಾಗುವ ಶಕ್ತಿ 655 ಕ್ಯಾಲೊರಿಗಳಷ್ಟಿದೆ. ಕ್ಯಾಲ್ಸಿಯಮ್, ರಂಜಕ, ಕಬ್ಬಿಣ, ತಯಾಮಿನ್, ನಿಕೋಟಿನಿಕ್ ಆಮ್ಲ, ರೈಬೊಫ್ಲೇವಿನ್, ಪೋಲಿಕ್ ಆಮ್ಲ ಟೋಕೋಫೆರಾಲ್, ಐಯೋಡೀನ್, ಮ್ಯಾಂಗನೀಸ್, ಸತು ಮುಂತಾದ ವಸ್ತುಗಳು ಸಾಕಷ್ಟು ಮೊತ್ತದಲ್ಲಿವೆ.

ಬಾದಾಮಿಎಣ್ಣೆ ಸ್ವಚ್ಛವಾದ ತೆಳುಹಳದಿ ಬಣ್ಣದ ಇಲ್ಲವೆ ಬಣ್ಣವಿಲ್ಲದ ದ್ರವ. ಬೀಜಗಳನ್ನು ಒತ್ತಡಕ್ಕೊಳಪಡಿಸಿ ಇದನ್ನು ಪಡೆಯಲಾಗುತ್ತದೆ. ಇದೊಂದು ಮೇದೋತೈಲ, ಇದನ್ನು ಔಷಧಿ ಹಾಗೂ ಸೌಂದರ್ಯವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ತೈಲ ಹೊರತೆಗೆದ ಬಳಿಕ ಉಳಿಯುವ ಹಿಂಡಿಯಲ್ಲಿ ಕಹಿಬಾದಾಮಿ ಎಣ್ಣೆ (ಬಿಟರ್ ಆಮಂಡ್ ಆಯಿಲ್ ಅಥವಾ ಓಲಿಯಮ್ ಅಮಿಗ್ಡಾಲಿಸ್ ಅಮರೀ) ಎಂಬ ಚಂಚಲ ತೈಲವೂ ಉಂಟು. ಇದೇ ಬಾದಾಮಿ ಎಸೆನ್ಸ್. ಹಿಂಡಿಯನ್ನು ನೀರಿನೊಂದಿಗೆ 500-600 ಸೆ. ಉಷ್ಣತೆಯಲ್ಲಿ 12 ಗಂಟೆಗಳ ಕಾಲ ಅರೆದು, ಆವಿ ಆಸವನದ ಮೂಲಕ ಇದನ್ನು ಪಡೆಯಲಾಗುತ್ತದೆ. ಇದು ಕೂಡ ವರ್ಣರಹಿತ, ಹೆಚ್ಚಿನ ರಿಫ್ರೇಕ್ಷಣಾಂಕ ಪಡೆದಿರುವ ಹಾಗೂ ಕಹಿ ಬಾದಾಮಿ ಪರಿಮಳವುಳ್ಳ ತೈಲ. ಮಿಠಾಯಿಗಳಿಗೆ ವಾಸನೆ ಕೊಡಲು ಇದನ್ನು ಉಪಯೋಗಿಸಲಾಗುತ್ತದೆ. ಹಲವಾರು ಬಗೆಯ ಚರ್ಮರೋಗಗಳ (ವೃದ್ಧಾಪ್ಯದಲ್ಲಿ ಬರುವ ತುರಿಕೆ ಮುಂತಾದ) ಚಿಕಿತ್ಸೆಗೆ ಅಲ್ಲದೆ ಶಾಮಕ ಔಷಧಿಯಾಗಿ ಕೂಡ ಇದರ ಬಳಕೆ ಉಂಟು.

ಚಿಪ್ಪನ್ನು ಉರುವಲಾಗಿ, ಲೋಹಗಳಿಗೆ ಮೆರುಗುಕೊಡುವ ಸಾಧನವಾಗಿ, ಚಿಪ್ಪಿನ ಬೂದಿಯನ್ನು ದಂತಧಾವನ ಚೂರ್ಣವಾಗಿ ಬಳಸುವುದಿದೆ. ಬಾದಾಮಿ ಮರದಿಂದ ಉತ್ತಮ ದರ್ಜೆಯ ಗೋಂದು ಕೂಡ ಲಭಿಸುತ್ತದೆ. ಚೌಬೀನೆಯಿಂದ ಕೆಲವು ತೆರನ ಉಪಕರಣಗಳನ್ನು ತಯಾರಿಸುವುದಿದೆ.

ಬೀಜಗಳಿಗೆ ಔಷಧೀಯ ಮಹತ್ತ್ವವೂ ಉಂಟು. ಇವು ಉತ್ತಮ ನರಪ್ರಚೋದಕ, ಮೂತ್ರೋತ್ತೇಜಕ, ಮೂತ್ರಾಶ್ಮ ನಿವಾರಕಗಳೆನಿಸಿವೆ. ಇವುಗಳ ಬೆಚ್ಚಾರವನ್ನು ಹಲವಾರು ಬಗೆಯ ಚರ್ಮರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಜಠರದ ಹುಣ್ಣಿನಿಂದ ನರಳುವವರಿಗೆ ಇದು ಉತ್ತಮ ಆಹಾರ.

ಭಾರತದ ಬಾದಾಮಿಯ ಉತ್ಪಾದನೆ ಕಡಿಮೆ ಪರಿಮಾಣದಲ್ಲಿದೆಯಾಗಿ ಆಫ್ಘಾನಿಸ್ಥಾನ, ಇರಾನ್, ಇರಾಕ್, ಇಟಲಿಗಳಿಂದ ಇದನ್ನು ಆಮದು ಮಾಡಿಕೊಳ್ಳಲಾಗುತ್ತದೆ.
(ಎಂ.ಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ